ಮೃಗೇಶವರ್ಮ - 
	ಆದ್ಯ ಕದಂಬವಂಶದ ರಾಜ (ಸುಮಾರು 455-80). ಶಾಂತಿವರ್ಮನ ಮಗ ಮತ್ತು ಉತ್ತರಾಧಿಕಾರಿ. ವೈಜಯಂತಿ (ಇಂದಿನ ಬನವಾಸಿ, ಉತ್ತರ ಕನ್ನಡ ಜಿಲ್ಲೆ) ಮತ್ತು ಪಲಾಶಿಕಾ (ಇಂದಿನ ಹಲಶಿ, ಬೆಳಗಾಂವಿ ಜಿಲ್ಲೆ) ಇವನ ರಾಜಧಾನಿಗಳಾಗಿದ್ದವು. ಇವನು ಗಂಗ ಮತ್ತು ಪಲ್ಲವರನ್ನು ಯುದ್ಧದಲ್ಲಿ ಸೋಲಿಸಿದ. ಬಹುಶಃ ಚಂದದಂಡ, ಎರಡನೆಯ ಸಿಂಹವರ್ಮ ಅಥವಾ ನಾಲ್ಕನೆಯ ಸ್ಕಂದವರ್ಮ ಇವರಲ್ಲಿ ಒಬ್ಬನನ್ನು ಸೋಲಿಸಿರಬೇಕು. ಈತ ಪರಧರ್ಮಸಹಿಷ್ಣುವಾಗಿದ್ದು ಹಿಂದು ಮತ್ತು ಜೈನಧರ್ಮದ ಅನೇಕ ಕಾರ್ಯಗಳ ಸಲುವಾಗಿ ದತ್ತಿನೀಡಿದ್ದ. ಹಲಶಿಯಲ್ಲಿ ಬಸದಿಯೊಂದನ್ನು ಕಟ್ಟಿಸಿದನೆಂದು ಶಾಸನವೊಂದರಿಂದ ತಿಳಿಯುತ್ತದೆ.

	ಕೈಕೇಯಿ ವಂಶದ ಪ್ರಭಾವತಿ ಇವನ ರಾಣಿ. ರವಿವರ್ಮ, ಭಾನುವರ್ಮ, ಶಿವರಥ ಇವನ ಮಕ್ಕಳು. ಇವನ ಮರಣಾನಂತರ ತಮ್ಮ ಶಿವಮಾಂಧಾತೃವರ್ಮ ಕದಂಬ ಸಿಂಹಾಸನವನ್ನೇರಿದ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರ ಮತ್ತು ಬನವಾಸಿಯಲ್ಲಿ ಇತ್ತೀಚೆಗೆ ದೊರೆತ ಎರಡು ಶಾಸನಗಳು ಇವನ ಜೀವನದ ಕೆಲ ಅಂಶಗಳನ್ನು ವಿಶಿಷ್ಟ ರೀತಿಯಲ್ಲಿ ನಮೂದಿಸುತ್ತವೆ.			
  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ